Friday, June 30, 2006

ಒಹ್! ಗೆಳತಿ

ಸ್ನೇಹಕ್ಕೊಂದು ಸವಿಯಾಗಿ ಬಂದವಳು! ಮನದಾಳದ ಪ್ರೀತಿಗೊಂದು ಕಾರಣ ಮಾತ್ರವಾಗಿರದೇ ಅದನ್ನು ಉಳಿಸಿ ಬೆಳೆಸಿದವಳು ನೀನು!!

ನಿನ್ನ ಜೊತೆಗಿನ ಕೆಲವೇ ಘಳಿಗೆಗಳು ಅದೆಷ್ಟು ಭಾವನೆಗಳನ್ನು ಹುಟ್ಟಿಸಿದೆ ಎಂದರೆ ದೂರವಿದ್ದರೂ ಮನಸು ಯಾವಾಗಲೂ ಆರ್ದ್ರ, ನಿನ್ನ ಸಿಹಿ ನೆನಪುಗಳಿಂದ, ಬೆಚ್ಚಗಿನ ಕನಸುಗಳಿಂದ. ಮತ್ತದೇ ಸಂಜೆ, ಅದೇ ಬೆಟ್ಟ, ಅದೇ ಬಂಡೆಯ ಸುತ್ತಲೇ ಮನಸು ಹರಿಯುತ್ತದೆ. ಅಂತಹ ಒಂದು ಕ್ಷಣವನ್ನು ಕೊಟ್ಟ ನಿನಗೊಂದು ಸವಿ ಮುತ್ತಿನ ಥ್ಯಾಂಕ್ಸ್! ರಾತ್ರಿಯ ಪ್ರೀತಿಯ ನಿದ್ದೆಯಲ್ಲೂ ನಿನ್ನದೊಂದು ಸಣ್ಣ ಕನವರಿಕೆ ಇದ್ದೇ ಇರುತ್ತದೆ.

ದಿನದ ಬೆಳಗಿನಲ್ಲಿ ನಿನ್ನ ದನಿಯ ಕೇಳುತ್ತ ಹಾಸಿಗೆಯ ಮುಸುಕಿನಲ್ಲಿ ಇನ್ನಷ್ಟು ನಿದ್ದೆಯ ತುಣುಕುಗಳನ್ನು ಆಸೆಯಿಂದ ಕದಿಯುತ್ತೇನೆ. ಅಲ್ಲಿ ಅರಳಿರುವ ಪ್ರೀತಿಯ ಕ್ಷಣಗಳನ್ನು ಮರೆಯದೆ ಎತ್ತಿಡುತ್ತೇನೆ, ನನ್ನ ಮನಸಿನ ಗೂಡಿನಲ್ಲಿ! ಇಷ್ಟದ ಹಾಡು, ಸಂಜೆಯ ಸೂರ್ಯ, ಕಡಲ ದಂಡೆ ಇವೆಲ್ಲದರ ಹೊರತಾಗಿ ನಿನ್ನ ನೆನಪು!! ಆಹ್...ಈ ಪ್ರೀತಿಗೆ ಸೋಲದೆ ಇರಲಾರೆ.

ನನಗೆ ನೀನೆಷ್ಟು ಇಷ್ಟ ಅಂತ ಪ್ರತೀ ಸಾರಿ ನನಗೆ ನಾನೇ ಕೇಳಿಕೊಂಡಾಗಲೆಲ್ಲ ನಿನ್ನ ಮೇಲಿನ ಪ್ರೀತಿ ಹೆಚ್ಚುತ್ತಲೇ ಹೋಗುತ್ತದೆ. ಅಷ್ಟಾಗಿಯೂ ಅಸಲಿಗೆ ನೀನೇಕೆ ಇಷ್ಟ ಅನ್ನುವುದನ್ನು ಯೋಚಿಸಿದಾಗಲೆಲ್ಲ ನಿನ್ನ ಸ್ನೇಹ, ನಿನ್ನ ನಗು, ನಿನ್ನ ಮಾತು, ನಿನ್ನ ಸಿಟ್ಟು, ನಿನ್ನ ವ್ಯಕ್ತಿತ್ವ, ನಿನ್ನ ಸೌಮ್ಯತೆ, ಸರಳತೆ ಹೀಗೆ ಏನೆಲ್ಲ ಕಾರಣಗಳು ಕಂಡರೂ ಅವೆಲ್ಲ ನೆಪ ಮಾತ್ರ. ನಿನ್ನ ಪ್ರೀತಿಸಲು ನನಗೆ ಕಾರಣಗಳೇ ಇಲ್ಲ, ಅವು ಬೇಕಾಗಿಯೂ ಇಲ್ಲ.

ಯೋಚಿಸಿದಷ್ಟೂ ಗೊಂದಲ
ಪ್ರೀತಿ ಇದೇನಾ
ಈ ಬದುಕಿಗೆ ನೀನೆ ಏಕೆ ಬೇಕು
ನಿನ್ನಂಥವಳಿದ್ದರೆ ಸಾಕಿತ್ತು..ಅಲ್ಲಾ

ನಾಳಿನ ಬದುಕಿಗೊಂದು ಕನಸಾಗಿ ಬಂದವಳು ನೀನು. ಒಂಟಿತನದ ನೀರಸ ಬದುಕಿನಲ್ಲಿ ಜೊತೆಯಾಗಿ ನಿಂತವಳು. ನನ್ನ ಹುಚ್ಚು ಕಲ್ಪನೆಗೆ ಅರ್ಥ ಕೊಟ್ಟವಳು. ನನ್ನ ನೋವಿಗೆ ಕಣ್ಣೀರಾದವಳು. ನೀನೆ ಅಲ್ಲವೆ ನನ್ನೆಲ್ಲ ಹಠವನ್ನು ಗೆದ್ದವಳು. ಬಾಳಿನುದ್ದಕ್ಕೂ ನಿನ್ನ ಜೊತೆ ಇರಲೇಬೇಕೆಂಬ ಹೆಬ್ಬಯಕೆ ದಿನವೂ ಹೆಚ್ಚುತ್ತದೆ. ಜೀವನದ ಕೊನೆಯ ಘಳಿಗೆ ನಿನ್ನ ಮಡಿಲಲ್ಲಿ ಇರಲೆಂದು ಬಯಸುತ್ತೇನೆ.

ನಿನ್ನೊಲವ ಆಸರೆಯ ಮಡಿಲಲ್ಲಿ ಇಂದೆನ್ನ
ಕನಸೆಲ್ಲ ತುಂಬಿಹೆನು ಬಲು ಪ್ರೀತಿಯಿಂದ
ಸಿಹಿ ಇರಲಿ ಕಹಿ ಬರಲಿ ನಾನಿರುವೆ,
ನಿನ್ನ ಜೊತೆಯಿರಲಿ ಉಸಿರಿರುವವರೆಗೆ

ಈ ಜೀವನವನ್ನು ಕೇಳಿದ್ದು ಕಡಿಮೆ, ಪಡೆದಿದ್ದೆ ಜಾಸ್ತಿ. ನಿನ್ನ ಸ್ನೇಹಕ್ಕೊಂದು ಪ್ರೀತಿಯ ನಮನ.

Thursday, June 22, 2006

ಒಹ್! ನೆನಪೇ!!!

ಪದೆ ಪದೆ ನೆನಪಾದೆ
ಪದೆ ಪದೆ ನೆನೆದೆ........

ನೆನಪುಗಳ ಗುಡ್ಡೆ ಹಾಕ್ಕೊಂದು ಕುತ್ಗೊಂಡಿದೀನಿ.....ಯಾವುದು ಇಷ್ಟಾ ಅಂತಾ ಹೇಗೆ ಹೇಳಲಿ....ಎಲ್ಲ ಇಷ್ಟಾನೇ....ಎಲ್ಲ ನಿನ್ನವೇ....
ಮೊದಲ ಮಾತಿನ ಕಂಪನದಿಂದ...ನಿನ್ನೆ ಮೊನ್ನೆಯ ಉಸಿರಿನ ಕಂಪಿನವರೆಗೆ....ಎಲ್ಲವೂ ಪ್ರಿಯವೆ....
ಇನ್ನು ಎಷ್ಟು ಹಗಲು ಎಷ್ಟು ರಾತ್ರಿಗಳು ಹೀಗೆ ಒಂಟಿ ಅಂದುಕೊಂಡಾಗಲೆಲ್ಲ ಈ ನೆನಪುಗಳ ಅಪ್ಪುಗೆಯಲ್ಲಿ ಬೇಸರ ಮರೆಯುತ್ತೇನೆ...
ಮನಸು ಮುನಿಸೆದ್ದು ಹಟ ಹಿಡಿದಾಗ ಒಂದು ಕಚಗುಳಿಯಿಟ್ಟು ಮುದ್ದಿಸಿದರೆ ಇನ್ನೊಂದು ಪ್ರೀತಿಯ ಹಾಡೊಂದ ನೆನಪಿಸಿ ಕಣ್ಣೀರಾಗಿಸುತ್ತದೆ.....

ನೆನಪುಗಳ ಮಾತು ಮಧುರ
ಮೌನಗಳ ರಾಗ ಮಧುರ

ಹೀಗೆ ಕೆಲವೊಮ್ಮೆ ನಿನ್ನ ನೊಡಲೇ ಬೇಕೆಂಬ ತುಮುಲ ಹೆಚ್ಚುತ್ತದೆ...ನಿನ್ನ ಪ್ರತಿ ಮಾತನ್ನು ಮನಸಿನ ಮೂಲೆಯಲ್ಲಿ ಬಂಧಿಸಬೇಕೆನಿಸುತ್ತದೆ.....
ಬಿಸಿ ಮುತ್ತಿನ ಬಿಸುಪಿನಲ್ಲಿ ನಿನ್ನ ಕರಗಿಸಿ ಬಿಡುವ ಆಸೆ ಹುಟ್ಟುತ್ತದೆ....
ಕಾಲದ ಕಣ್ಣು ತಪ್ಪಿಸಿ ಈ ದಿನಗಳನ್ನು ಬೇಗ ಮುಗಿಸಿ ನಾಳೆ ಇಂದೇ ಆಗಬಾರದೆ ಅಂತ ಮನಸು ಕೇಳುತ್ತದೆ....
ಏಕಿಷ್ಟು ದೂರ.....ಪ್ರತಿ ಕ್ಷಣ ಹೃದಯ ಕೇಳುವ ಪ್ರಶ್ನೆ....ಏನು ಹೇಳಿ ಸಮಾಧಾನಿಸಲಿ??...

ರಾತ್ರಿಯ ಕನಸುಗಳಿಗೆ ಬರೀ ಭರವಸೆಯ ಉತ್ತರ ಕೊಟ್ಟು ಎಷ್ಟೂ ಅಂತಾ ಸುಮ್ಮನಿರಸಲಿ....?

ಇವತ್ತು ಮಾತ್ರ ಒಂದಂತೂ ನಿಟ್ಟುಸಿರಾಗಿ ಉರುಳಿ ಹೊಯ್ತು.....ಅಷ್ಟಕ್ಕೆ ಎದೆ ಬಡಿತ ನಿಂತೇ ಹೋಯಿತು ಅನಿಸಬೇಕೆ??

ಬೆಳದಿಂಗಳಾಗಿ ಬಾ....
ಕಣ್ಣ ನಗುವಿನೊಳಗೆ....

ಅಷ್ಟಾಗಿಯೂ ನಿನ್ನ ನೆನಪಿಸುವಾಗಲೆಲ್ಲ ಆಸೆಯ ಕನಸು ಮನಸು ತುಂಬಿ ಬೆಚ್ಚಗಾಗಿಸುತ್ತೆ....ಚಳಿಗಾಲದ ಬಿಸಿಲಿನಂತೆ....
ಕಾಯ್ದ ಹೃದಯಕ್ಕೆ ತಂಪನ್ನೀಯುತ್ತದೆ .....ಬೇಸಿಗೆ ಸಂಜೆಯ ತಂಗಾಳಿಯಂತೆ....

ಇಂದು ಬೆಳಿಗ್ಗೆ ನಿನ್ನ ಕನಸನ್ನ ಬಿಟ್ಟೇಳಿಸಿದ್ದು ನೀನೆ ಅಲ್ಲವೆ....

ಪ್ರತಿ ಬೆಳಗು ನಿನ್ನದಿರಲಿ
ರಾತ್ರಿ ನಿನ್ನ ನೆನಪಿಗಿರಲಿ......

ಈ ನೆನಪುಗಳಿಗೆ ಕೊನೆ ಇರದಿರಲಿ...............

Friday, June 16, 2006

ನಾನೇ!?!

ಒಂದು ನಾಲ್ಕು ಪದ್ಯದ ಸಾಲು....ಒಂದಷ್ಟು ಭಾವನೆಗಳ ಹೂರಣ...ಒಂದ ಸ್ವಲ್ಪ ಪ್ರೀತಿಯ ಮಾತು....ಕೊಂಚ ತರ್ಲೆ ....ಸ್ವಲ್ಪ philosophy...ಮತ್ತೇನಿದೆ ..ಇದರಲ್ಲಿ ...ನಾನು ಬರೆಯೊದೇ ಇಷ್ಟು...ನನಗೆ ಗೊತ್ತಿರೊದೇ ಇಷ್ಟು
life ನಾ ಇದೇ ರೀತಿ ಇರ್ಬೇಕು ಅಂತಾ ಕೇಳಿರ್ಲಿಲ್ಲಾ ನಾನು...ಹೇಗೆ ಬಂದಿದೆಯೋ ಹಾಗೇ ತೆಗೆದ್ಕೊಂಡಿದೀನಿ....expectation ಅನ್ನೊ ಭೂತ ಯಾವತ್ತೂ ಕಾಡಿಲ್ಲಾ...

ಏಷ್ಟೋ ಸಲ ಅದೇ compound ಮೇಲೆ ಕೂತು ಗೊಲಗುಂಬಜ ನೊಡ್ತಿರೊ ನನ್ನ ನಾ ನೆನೆದಾಗ ಒಂದ ಖುಶಿ..ಯಾಕ್ ಗೊತ್ತಾ? .... ಆ introvert ನಲ್ಲಿ ಭಾವನೆಗಳ ಕೊರತೆ ಕಂಡಿದ್ದೇ ಇಲ್ಲಾ.....ಇವತ್ತಿನಲ್ಲಿ ಜೀವಿಸಿದ್ದು ಭಾಳಾ ಕಡಿಮೆ.....either ಕನಸು ಇಲ್ಲ ಅಂದ್ರೆ ನೆನಪು....
ಕಾರಣಕ್ಕಾಗಿ ಎನೂ ಮಾಡೋಕೆ ಹೋಗಿಲ್ಲಾ....ಮಾಡಿದ್ದಕ್ಕೆ ಕಾರಣ ಹುಡ್ಕಿದೀನಿ...explanation follows the results ..ಆ ಥರಾ...

ಮುಂಗಾರು ಹೀಗೆನಾ!!!

ಶ್ರಾವಣ......ಗಾಳಿ ಮಳೆಯಿಂದ ನಡುಗಿದ ಭೂಮಿ ಸ್ವಲ್ಪ ವಿಶ್ರಾಂತಿ ಬಯಸಿ ತಣಿಯುವ ಕಾಲ....ಸುರಿವ ಮಳೆಯಲ್ಲೂ ಒಂದು Rhythm ಇರ್ತದ ಈಗ.....ವಸಂತ ಚಿಗುರಿಸಿದ ಆಸೆಯ ಮೊಳಕೆ ಗಟ್ಟಿಯಾಗಿ ನೆಲ ಕಚ್ಚಿ ಹಿಡಿದು ಹೊಸ ಜೀವನದ ಅಡಿಪಾಯ ಹಾಕಿ ಮುಗಿಲ ಮಳೆಗೆ ತನುವ ಬಿಚ್ಚಿ ನಗುವ ಸಮಯ..ಈಗಿನ ಮಳೆಯಲ್ಲೂ ಒಂದೊಂದು ವಿಧ ...ಬೆಳಿಗ್ಗೆ ಬಂದ್ರೆ ಸೂರ್ಯನ ಮುಖ ತೊಳೆದು ನಿಚ್ಚಳ ಮಾಡಿ ಒಂದು ಹೊಸದಿನದ ಹುಮ್ಮಸ್ಸು ಮೂಡಿಸುತ್ತೆ....ಮಧ್ಯಾಹ್ನ ಬಂದ್ರೆ ಬಿಸಿಲಿನ ಬೇಗೆ ಮರೆಸುತ್ತೆ ..ಇನ್ನು ಸಂಜೆ ಬಂದ್ರೆ ಕೇಳಲೇ ಬೇಡ..... ನೋಡುಗರ ಸ್ವರ್ಗ ...ಕವಿಗಳಿಗೆ ಹಬ್ಬ..ಪ್ರೇಮಿಗಳಿಗೆ ಬಾಚಿ ತಬ್ಬಿಕೊಳ್ಳೋಕೆ ಒಂದು ನೆಪ........ಅದೇ ರಾತ್ರಿ ಮಳೆ ಬಂದರೆ...ಮುಖೇಶನ Silent ಹಾಡು....ಕಗ್ಗದ ಸಾಲು.....ಗಾಲಿಬ್'ನ ಶಾಯರಿ....ಮರಳಿ ನೆನಪಿಗೆ ಬಂದ ಇಷ್ಟದ ಹಾಡು...ಏನೆಲ್ಲಾ ಅನಿಸುತ್ತೆ ಅಲ್ವಾ...
ರಾತ್ರಿ ಗುಡುಗು ಮಿಂಚಿನ ಮಳೆ ಬೀಳೊವಾಗ...ಕಿಟಕಿ ಹತ್ರ Bed ಮೇಲೆ ಕೂತ್ಗೊಂಡು...ಹೊರಗಡೆ ನೋಡತಾ ಇದ್ರೆ ಸಾಕು ...Time ಹೋಗಿದ್ದು ಗೊತ್ತಾಗೋದೇ ಇಲ್ಲಾ..ಮುಂದೆ ಪ್ರೀತಿಯ ಕನಸು ...ಹಿಂದೆ ಒಲವಿನ ನೆನಪು ಇದ್ರಂತು ಆಯ್ತು..........ಆ ಮಳೆಗೆ ಎನೋ ಕಳೆ ಇರ್ತದ..

ಮತ್ತೆ ಮನಸಿನಾಳದಿ ಮುಳುಗಿ..
ಜೀವ ಬೆಳಕ ಮಿಂದಿದೆ.....
ಹರ್ಷ ಸಲ್ಲಾಪ..
ಇನ್ನೂ ಸಂಕೋಚ
ಮನಸಿಗಾವ ಸರಸ ಬೆರೆತಿಹೆ...

ಪಂಚಮಿ....ಹೆಂಗಳೆಯರ ನೆಚ್ಚಿನ ಹಬ್ಬ...ತವರಿನ ಕೂಗಿಗೆ ಮಗಳು ಓಗೊಡುವ ಸಮಯ..ಮತ್ತೆ ಜೋಕಾಲಿ....ಅಕ್ಕರೆಯ ಗೆಳತಿಯರ ಒಡನಾಟ..ಹೊಸ ಬಳೆಗಳ ಕಿಂಕಿಣಿ ...ಇಷ್ಟ ದೇವತೆಗೆ ಭಕ್ತಿ-ಶೃಧ್ಧೆಯ ಅರ್ಪಣೆ...ಮನದಿ ಪ್ರಿಯನ ಸಲ್ಲಾಪ..ಅಶಾಢದ ವಿರಹದ ಕರಿ ಇರುಳ ಕತ್ತಲೆಯ ಬೇಗೆ ಕರಗಿ...ಸಮ್ಮಿಲನದ ಸಂತಸ..ಸಂಭ್ರಮ...ಶ್ರಾವಣಾ ಸೋಮವಾರಗಳ 'ಅಳ್ಳಿಕೇರಿ',ಎಂದಿನಿಂದಲೂ ಪ್ರಿಯ...ಮಾಡಿದ ತಿಂಡಿ ಸವಿಯಲು ಬಗೆ ಬಗೆಯ ನೆಪ ..ಪ್ರಕೃತಿಯಲ್ಲಿ ಎನೋ ಒಂದು ಆರ್ದೃತೆ ಮಮತೆ ....ಬೆಳಗಿನ ಮಂಜು...ಮಧ್ಯಾಹ್ನದ ಬಿಸಿಲು....ಸಂಜೆಯ ಮಳೆ ಎಲ್ಲವೂ ಹಿತ...ಮನೆ ಎಲ್ಲಾ ಗಡಿಬಿಡಿ ವಾತಾವರಣ...ಒಂದು ವಿಶಿಷ್ಟ ಸಂಭ್ರಮ....ದಿನ ಖಾಲಿ ಅನಿಸುವುದಿಲ್ಲಾ..ಎನಾದರೊಂದು ಕೆಲಸ......
ನಮ್ಮ ಸಂಸ್ಕೃತಿಯಲ್ಲಿ ಎಷ್ಟೊಂದು ಮೂಢ ನಂಬಿಕೆ ಇದ್ರೂ ಒಂದು Plus Point ಏನಂದ್ರೆ..ಈ ಆಚಾರಗಳು ಶೃಧ್ಧೆ-ಏಕಾಗ್ರತೆಯನ್ನ ಕೊಡ್ತವೆ....ಮನಸಿಗೊಂದು ಗುರಿ ಇರ್ತದ....ದಾರಿ ಸ್ಪಷ್ಟ...

ಉಯ್ಯಾಲೆಯ ತೂಗುವಾ ಪರಿ
ಸಿಹಿಯನು ಹಂಚುವಾ ಖುಷಿ
ಋತುವಿನ ಗಾನದಾ-ಸವಿ
ಅದಕ್ಕೆ ಅಲ್ವಾ ಹೇಳಿದ್ದು..........ರಸಮಯ ಸ್ನೇಹ-ಪಂಚಮಿ............

ಆಸೆಗಳ ಹುತ್ತದಿ ಕನಸಿನ ಹಾಲುಣಿಪ ಮನಸಿನ ನಾಗರಕೆ ...
ಹುಲು ಮಾನವನ ಮತ್ಸರಕೆ ಸ್ನೇಹ-ಪ್ರೀತಿಯೇ ಸರಿ ಕುಣಿಕೆ.....

ಕನಸುಗಳೇ ಹೀಗೆ!!!

ಹೊರಗಡೆ ಮಳೆ ಬೀಳತಾ ಇರ್ತದ ....ಸಣ್ಣಗೆ ಚಳಿ ಬೇರೆ...ಆಕಡೆಯಿಂದ ...ಗಾಳಿ ಜೋರಾಗಿ ಬೀಸ್ತಿರ್ತದ...ಈಕಡೆ ಮನೆಯ ಅಂಗಳದ ಕಂಭಕ್ಕೆ ಒರಗಿ ನಿಂತ 'ಅವಳು' ಬೀಳ್ತಿರೊ ಮಳೆ ನೋಡತಾ ನಿಟ್ಟುಸಿರು ಬಿಡ್ತಿರ್ತಾಳ......ಹೊರಗಡೆ ಗಾಡಿ ನಿಂತ ಶಬ್ದ!......ಗೇಟ್ ಕ್ರೀಕ್ ಅಂತ ಅಂದಾಗ್ಲೆ ಗೊತ್ತಾಯ್ತು ಯಾರೋ ಬಂದಿದಾರೆ ಅಂತ.......ಒಂದ ಕ್ಷಣ ಎದೆ ಬಡಿತ ಜಾಸ್ತಿ ಆಗಿ ಕಾಲಲ್ಲಿ ನಡುಕು...ಅಷ್ಟರಲ್ಲಿ ಡೋರ್ ಬೆಲ್ ಹಾಡೋಕೆ ಶುರು ಮಾಡ್ತು....ಅಣ್ಣ ಕೊಟ್ಟ ವಿಂಡ ಚೈಮ್ಸ್ ನ 'ಟಿನ್'ಟಿನಿನ್ ಟಿನ್' ಇನ್ನೂ ಹೆಚ್ಚಾಯ್ತು.....ಬಾಗಿಲ ಹತ್ರ ಹೋಗ್ಲಿಕ್ಕೆ ಕೊಂಚ ಸಂಕೋಚ...ಮನದಲ್ಲಿ ಸಂಗೀತ ಕಾರಂಜಿ......ಅದರ ಹಿಂದೇನೇ ಹಣೆಯಲ್ಲಿ ಬೆವರಿನ ಸಾಲು...ಬಂದವರು ಅವರೇನಾ!?!......ಅವರೇ! ಅಂತ ಕಾಲ್ಗೆಜ್ಜೆ ಹೇಳಿತ್ತು..........ಮುಂಬಾಗಿಲದ ಹೊಚ್ಚಲ ಕಡೆ ನೋಡ್ತ ಬಾಗಿಲ ತಗದ್ಲು.......

......'ಧಪ್ಪ!!!!'ಅಂತ ಕಪಾಟ ಮ್ಯಾಲಿಂದ ಒಂದು ಪುಸ್ತಕ ತಲಿಮ್ಯಾಲೆ ಬಿತ್ತು......ಕೈಯಾಗ ತುಗೊಂಡ ಕಣ್'ಬಿಟ್ಟು ನೋಡಿದ್ಲು..ಮುಖಪುಟದ್ ಮೇಲೆ ಬರ್ದಿತ್ತು............."ಕನಸುಗಳು......". ಪ್ರೀತಿಯಿಂದ!!!

------------------

ಜಿಟಿ ಜಿಟಿ ಮಳೆ.....ಹಸಿಯಾದ ರೋಡು .....ಸಣ್ಣಗೆ ಯುನಿವರ್ಸಿಟಿ ಕಡೆಯಿಂದ ಬರೋ ಗಾಳಿ... ಒಂದೇ ಛತ್ರಿ.. ಅದೂ ಸ್ವಲ್ಪ ಸಣ್ಣದೇ....ಎಡಗಯ್ಯಿಂದ ಅವನ ಹೆಗಲು ಮೇಲೆ ಭಾರ ಹಾಕಿ....ತಲೆ ಅವನ ಭುಜಕ್ಕೆ ಆನಿಸಿ ನೆಲ ನೋಡತಾ ನಡೀತಿರೊವಾಗ...ಬರೀ ಮೌನ! ..ಮಾತೇ ಇಲ್ಲಾ.....ದೂರದಲ್ಲಿ ಚಹಾದ ಅಂಗಡಿ ರೇಡಿಯೊ ಹಾಡ್ಲಿಕ್ಕೆ ಶುರು ಮಾಡೇದ......."ಪ್ಯಾರ್ ಹುವಾ ಇಕರಾರ್ ಹುವಾ......"...
ಅದನ್ನೆ ಕೇಳ್ತಾ ಹೆಜ್ಜೆ ಹಾಕೊವಾಗ ..ಒಮ್ಮೆಲೆ ಟ್ರೈನ್ ಹೊರ್ನ್ ಆದ ಶಬ್ದ...ಕೇಳಿ ಒಂದ ಕ್ಷಣ ಶಾಕ್'ನಲ್ಲಿ ಹಿಡಿದ ಅವನ ಕೈ ಅಮುಕಿದ್ದು ನೆನೆಸಿಕೊಂಡರೆ ಏನು ಖುಶಿ?!?! ..ಸಣ್ಣಗೆ ಕಂಡ್ರೂ-ಕೇಳಿಸದೆ ಇರೊ ಹಾಗೆ ನಗು.....ಸ್ವಲ್ಪ ಬಿಸಿ ಉಸಿರು..

.....ಆಕಡೆ ಇಂದ ಅಮ್ಮ ಬೈಕೊಂತ ಬರ್ತಾಳ...."ಎನ್ ಹುಡುಗಿ ಇದು ...ಅವಾಗಿಂದಾ ಕುಕ್ಕರ್ ಶೀಟಿ ಹೊಡಿಲಿಕ್ಕೆ ಹತ್ತೆದ ,,ಆರಸು, ಅಂದ್ರ ಅದರ ಮುಂದ ನಕ್ಕೊಂತ ನಿಂತಾಳ......ಏನ್ ಹುಡಿಗಿಯೊ ಏನೋ!!..."........

------------------

ಈ ಮಧ್ಯಾಹ್ನಗಳೇ ಹೀಗೆ....ದಿನದ ಮುಕ್ಕಾಲು ಭಾಗ ಇದರಲ್ಲೇ ಕಳೆದ್ರೂ ಜಾಸ್ತಿ ಏನೂ ಮಾಡ್ಲಿಕ್ಕೆ ಆಗಂಗಿಲ್ಲಾ......ಈಗ ತಾನೆ ಊಟ ಮುಗಿಸಿ ...ಅದರ ಎಲ್ಲಾ ಕೆಲ್ಸಾ ಮುಗಿಸ್ಕೊಂಡ.....ಸುಮ್ಮನೆ ಕೂತಿರ್ಬೇಕಾದ್ರೆ ಎನೋ ಒಂಟಿ ಅಂತ ಅನಿಸ್ತು ...ಬೇಜಾರು ಕಳೀಲಿ ಅಂತಾ ಅಲ್ಲೇ ದಿವಾನದ ಮೇಲೆ ಕೂತು ಸ್ವಲ್ಪಾ ಹೊತ್ತು ಅಕ್ವೆರಿಯಮ್ ನಲ್ಲಿರೋ ಮೀನು ನೋಡ್ತಾ ಇದ್ದೆ...ಸ್ವಲ್ಪ ಹೊತ್ತಿಗೆ ಅದು ಸಾಕು ಅನ್ನಿಸಿ ಶೆಲ್ಫ ನಲ್ಲಿರೊ ಮಂಕುತಿಮ್ಮನ ಕಗ್ಗ ತುಗೊಂಡು ಓದೋಕೆ ಶುರು ಮಾಡದೆ.........ಜೀವನಾನ ಇಷ್ಟು ಕಡಿಮೆ ಪದಗಳಲ್ಲಿ ಹಿಡಿದಿಡೋದು ಡಿ.ವಿ.ಜಿ ಗೆ ಮಾತ್ರ ಸಾಧ್ಯಾ ಅನಿಸ್ತು....ಇದೇನು!!! ಪ್ರೀತಿ ಪ್ರೇಮ ಅಂತಾ ನೆನಪು ಮಾಡ್ಕೋ ಸಮಯದಲ್ಲಿ ಫಿಲೋಸೊಫಿ ಶುರು ಮಾಡಿದ್ನಲ್ಲ..ಅಂತಾ ಒಂದ ಕ್ಷಣ ಆಶ್ಚರ್ಯ ಆಯ್ತು....ಆದ್ರೂ ಕಗ್ಗದ ಮೇಲೆ ಅದೇನೋ ಅಭಿಮಾನ ... ಯಾವಾಗೆಲ್ಲಾ ಒಂಟಿ ಅಂತಾ ಅನಿಸ್ತಿತ್ತು ಅವಾಗೆಲ್ಲ ಜೊತೆ ಅನಿಸಿದ್ದು ಇದೇ ಕಗ್ಗ....ಅಷ್ಟು ಬೇಗ ಮರೆಯೊದಲ್ಲಾ.......ಆದರೂ ಈಚೆ ಮನಸು ಒಂದ ಕಡೆ ನಿಲ್ಲಲ್ಲ ಅಂತ ಅನಿಸ್ತದೆ...ದಿನದ ರೆಗುಲ್ಯಾರಿಟಿ ನಲ್ಲಿ ...ಎಷ್ಟೊಂದ ಸಮಯ ಗೊತ್ತಿಲ್ದೆ 'ಅವರ'ನ್ನ ಮನಸು ನೆನೆಸಿರ್ತದೆ...ಅಲ್ಲೆ ಸ್ಟೇರ್ ಕೇಸ್ ಮೇಲೆ ಕೂತು ಈಗ ಅವರು ಏನು ಮಾಡ್ತಿರ್ ಬಹುದು ...ನನ್ನ ನೆನಪು ಬಂದಿರ್ತದಾ? ....ಇವತ್ತು ಫೋನ್ ಬರಬಹುದು...ಏನೆಲ್ಲ ಹೇಳ್ಬೇಕು!?!...ಈಗೀಗ ಯಾಕೋ ಕಂಪ್ಯೂಟರ್ ಮುಂದೆ ಕುಳಿತರೆ ಏನ್ ಬರೀಬೇಕು ಅಂತಾ ತೋಚೋದೆ ಇಲ್ಲಾ....ಬೆರಳಲ್ಲಿರೋ ಉಂಗುರ ನೋಡ್ತಾ ನಗು ಬರ್ತದ ....ಅವರ ಕೈಯಾಗಿನ ನಡುಕು! ...ಎಲ್ಲ ಈಗ ಒಂದ ಹತ್ತು ನಿಮಿಷಗಳ ಹಿಂದ ನಡದದೇನೋ ಅಂತಾ ಅನಿಸ್ತದ...ಮಳೆ ಬಿದ್ದು ಚಳಿ ಇದ್ರು ..ಬೆವೆರಿನ ಹನಿ ಮೂಡಿದವು.. ಹಣಿ ಮೇಲೆ!!.....ಅವತ್ತ ಸಂಜೆ ತಿಂದ ಪಾನಿ ಪುರಿ ರುಚಿ ಇನ್ನೂ ಹಂಗ ಉಳದದ.....ಛೆ!! ...ಪ್ರತಿದಿನಾನೂ ರವಿವಾರ ಆಗಿರಬಾರ್ದಾ.....ಪ್ರತಿ ರವಿವಾರಾನೂ ಆ ದಿನಾ ಆಗಿರಬಾರ್ದಾ............ವಿಂಡ್ ಚೈಮ್ಸ್ ನಗಲಿಕ್ಕೆಹತ್ತೇದ............
ಮತ್ತೊಂದು ದಿನಾ ಹತ್ತಿರ ಆಯ್ತು 'ಹತ್ತಿರ' ಆಗ್ಲಿಕ್ಕೆ......

Wednesday, June 07, 2006

ನೆನಪಿಗೊಂದು ನೆಪ!!!!

ಈ ಚಿಕಾಗೋ ವೆದರ್ ಹೀಗೆನೇ..ಒಂದು ಕ್ಷಣ ಇದ್ದದ್ದು ಇನ್ನೊಂದು ಕ್ಷಣ ಇರಲ್ಲಾ
ನಿನ್ನೇನೆ ಬಿಸಿಲು ಒಂದು ಬೆಚ್ಚಗಿನ ಹೈ! ಹೇಳಿ ಬೆವರಿಳಿಸಿತ್ತು.ಇವತ್ತು ಸೂರ್ಯ ನಾಪತ್ತೆ.
ಅದೇ ಮಳೆಗಾಲದ ಬೆಂಗಳೂರ ಹವೆ.ಮೊಡ.. ಆಮೇಲೆ ಒಂದಷ್ಟು ಚಳಿ ಗಾಳಿ.

ಬರೀ ನೆನಪು ಮೆಲುಕು ಹಾಕೋದೆ ಸವಿ ಅನ್ಕೊಂಡಿರೋವಾಗ ಈ ದಿನಗಳು ಪ್ರತಿ ಕ್ಷಣದ ಸಂತೋಷ ಹೊತ್ತು ತಂದಾಗ ಬೇಸರಿಕೆ ಮರೆಯೋದು ಸುಳ್ಳಲ್ಲಾ..
ಅದು ಸಂಜೆ ಈ ಕೆರೆ ದಂಡೆ ಮೇಲಿನ ವಾಕ್ ಇರಬಹುದು..ರಾತ್ರಿಯ ನೀರವತೆಯಲ್ಲೊಂದು ಕೇಳದ ಪಿಸುಮಾತು
ಯಾವಾಗ್ಲೋ ಮರೆತು ಸುರಿಸಿ ಹೋಗೊ ಸಂಜೆ ಮಳೆ..

ಹೀಗೆ ಒಂದು ದಿನ ಮತ್ತೆ ಉರುಳುತ್ತದೆ..ಆದರೂ ನಾಳೆ ಕಾಯುವ ತಾಳ್ಮೆ ಕಡಿಮೆಯಾಗಿದೆಯೋ ಅಥವಾ ಈ ದಿನಗಳೇ ಇಷ್ಟೊಂದು ನಿಧಾನಾನೋ!!!

ಅದು ಹೇಗೆ ಇದ್ರೂ ಒಂದಂತು ನಿಜ.ಬಂದು ಒಂದು ತಿಂಗಳಾಯ್ತು ಆದ್ರೆ ನಿನ್ನೇನೆ ಮೈಸೂರಿಂದ ಬಸ್ ಹತ್ತಿದ ನೆನಪು....
ಮನಸಿನ ಪಟಲದಲ್ಲಿ ಆ ಕ್ಷಣಗಳು ಮರಳಿ ತಿರುಗುತ್ತಲೇ ಇರುತ್ತವೆ.


ಇಷ್ಟೊತ್ತಿಗಾಗ್ಲೆ ಬೆಂಗಳೂರು ಒಂದು ಮಳೆ ನೆನೆದು ಕ್ಲೀನ್ ಆಗಿರ್ತದ.ಈ ಸಲ ಗುಲ್ಮೊಹರ್ ಜಾಸ್ತೀ ನೋಡೋಕೆ ಆಗ್ಲಿಲ್ಲ ಅಂತಾ ಬೇಜಾರು ಅಷ್ಟೇ
ಆದರಲ್ಲೂ ಫೆಬ್ರವರಿ ನಲ್ಲಿ ಸುತ್ತಾಡೊಕೆ ಅನೇಕ ಕಾರಣಗಳು ಇರತಿದ್ವು..ಅಲ್ವಾ!!!!


ವಿಚಿತ್ರ ಅಂದ್ರೆಈ ಊರು ನನಗೆ ಚೆನ್ನೈ ನೆನಪಿಗೆ ತರ್ತದ!!!!......ಒಂದು ಕ್ಷಣ ಯೋಚಿಸಿದೆ
ಮರೀನ ಬೀಚ್ ತರದೊಂದು ಬೀಚು.ಆ ಕೂವಂ ತರದೊಂದು ನದಿ(!?!).ಒಂಟಿ ರಾತ್ರಿಗಳು.
..ನಿನ್ನ ಜೊತೆಗಿನ ಮಾತುಗಳು ಸರೀ ತಾನೆ!!!!.......

ಮನಸಿನ ಭಾವನೆಗಳು.....ಎಲ್ಲಿ ಇದ್ದರು ಬದಲಾಗಲ್ಲ ಅನ್ನೊದು ಎಷ್ಟು ನಿಜ.!!....ನಾವು ಆ ಜೀವನಕ್ಕೆ ಹೊಂದುಕೊಳ್ಳತೀವೆ ಹೊರತೂ ಒಳಗೆ ಯಾವಾಗ್ಲೂ ಅದೇ!!!
..ಒಂದಷ್ಟು ಕನಸು.ಹೊಸದೊಂದು ಕವನದ ಸಾಲು.ಕಾದಂಬರಿಯ ಆ ಮರೆಯದ ಮಾತು...ಹೀಗೆ ..ನಾಳೆ ಮತ್ತೆ ನಿನ್ನೆಯಾಗುವವರೆಗೆ

ಈಗಿನ ದಿನಗಳನ್ನು ಮುಂದೆ ಹೇಗೆ ನೆನಪಿಸಿಕೊಳ್ತೀನೊ ಗೊತ್ತಿಲ್ಲಾ.!!!!